ಗೋಕುಲದಲ್ಲಿ ಸಹೃದಯಿ ಪ್ರಕಾಶ!
ಭಾವನೆಗಳ ತೀವ್ರತೆಯ ಆಳಕ್ಕಿಳಿದು ಸದಭಿರುಚಿ ಚಿತ್ರಗಳ ನೀಡುವ ಪ್ರಕಾಶ್ ಮೂಲಕ ಕನ್ನಡ ಚಿತ್ರ ರಸಿಕರ ಹೃದಯದಲ್ಲಿ ನೆಲೆನಿಂತ ನಿರ್ದೇಶಕ ಪ್ರಕಾಶ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ಖುಷಿಯ ಪ್ರೌಢಿಮೆ, ‘ರಿಷಿಯ ಬಾಂಧವ್ಯ, ‘ಮಿಲನದ ಭಾವೋತ್ಕರ್ಷ ಇದಕ್ಕೆ ಸಾಕ್ಷಿ. ಈ ಜೋಳಿಗೆಗೆ ‘ಗೋಕುಲ ಚಿತ್ರವೂ ಸೇರಲಿ ಎಂಬುದೆ ನಮ್ಮ ಹೆಬ್ಬಯಕೆ.
ಕಥೆಯ ಆಶಯಕ್ಕನುಗುಣವಾಗಿ ಚಿತ್ರಕಥೆ, ಸಂಭಾಷಣೆಯಲ್ಲಿ ವೇಗ ಕಾಯ್ದುಕೊಂಡು ಅಂತಿಮವಾಗಿ ತನ್ನ ನಿರ್ದೇಶನದಲ್ಲಿ ವ್ಯಾಪಾರಿ ಚಿತ್ರವೊಂದಕ್ಕೆ ಬೇಕಾದ ಸರಕು ಸಮೇತ ನೋಡುಗರ ನಾಡಿಮಿಡಿತ ಗ್ರಹಿಸಿ ನವಿರಾದ ದೃಶ್ಯಕಾವ್ಯ ಕಟ್ಟುವುದರಲ್ಲಿ ಪ್ರಕಾಶ್‌ಗೆ ಪ್ರಕಾಶ್ ಮಾತ್ರ ಸಾಟಿಯಾಗಬಲ್ಲರು.
ತನ್ನ ತಂತ್ರಜ್ಞರೊಳಗಿನ ಕ್ರಿಯಾಶೀಲ ಜಗತ್ತಿಗೆ ಲಗ್ಗೆಯಿಟ್ಟು ಕೆಲಸ ತೆಗೆದುಕೊಳ್ಳುವುದರ ಜೊತೆಗೆ ಸೂಕ್ತ ಸಂಭಾವನೆ ನೀಡಿ ಸ್ಪಂದಿಸುವ ದೊಡ್ಡತನ ಇವರದು. ಇತ್ತೀಚಿಗೆ ಅಂಥದೊಂದು ಘಟನೆ ಪುನರಾವರ್ತನೆಯಾಗಿದ್ದು ‘ಗೋಕುಲ ಚಿತ್ರೀಕರಣದ ಸಂದರ್ಭದಲ್ಲಿ. ಹಾಡುಗಳ ರೆಕಾರ್ಡಿಂಗ್ ನಡೆಯುವಾಗ ಸಂಗೀತ ನಿರ್ದೇಶಕ ಮನೋಮೂರ್ತಿ ಆಶಿಸಿದಂತೆ ಸಾಹಿತಿ ಹೃದಯಶಿವರನ್ನು ಬರಮಾಡಿಕೊಂಡು ಒಂದು ಬಿಟ್ ಸಾಂಗ್ ಬರೆಸಿ ಸೂಕ್ತ ಸಂಭಾವನೆ ನೀಡಿ ಸಾಹಿತಿಗಳ ಬಗೆಗಿನ ತಮ್ಮ ಪ್ರೀತಿಯನ್ನು ಸಾಬೀತು ಮಾಡಿದ್ದಾರೆ.
ಒಬ್ಬ ಉದಯೋನ್ಮುಖ ಕವಿಯ ಬೆಳವಣಿಗೆ ಉತ್ತಮ ಅವಕಾಶಗಳ ಹಿಂದೆ ಅಡಗಿರುತ್ತದೆ ಎಂಬ ಪರಿಕಲ್ಪನೆ ಹೊಂದಿರುವ ನಿರ್ದೇಶಕ ಪ್ರಕಾಶ್‌ರವರಿಗೂ, ಸದಾ ಹೊಸತನ್ನು ಚಿಂತಿಸುವ ಸಾಹಿತಿ ಹೃದಯಶಿವರವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಮಧುರವಾದ ಗೀತೆಗಳನ್ನೊಳಗೊಂಡ ‘ಗೋಕುಲ ಚಿತ್ರ ಎಲ್ಲರ ಮನಮುಟ್ಟಲಿ ಎಂದು ‘ಸಿನಿ ಸರ್ಕಲ್ ಆಶಿಸುತ್ತದೆ.
No comments:
Post a Comment
Your comments: